ಮೆಂಡಲೀಫ್, ಡ್ಮಿಟ್ರಿ ಐವನೋವಿಚ್
1834-1907. ರಷ್ಯದ ರಸಾಯನವಿಜ್ಞಾನಿ. ಜನನ ಟೊಬೋಲ್ಸ್ಕ್, ಸೈಬೀರಿಯ 7-2-1834: ಮರಣ ಸೇಂಟ್ ಪೀಟರ್ಸ್‍ಬರ್ಗ್ (ಲೆನಿನ್‍ಗ್ರಾಡ್) 2-2-1907. ಸ್ಥಳೀಯ ಪ್ರೌಢಶಾಲೆಯ ಮುಖ್ಯಸ್ಥನಾಗಿದ್ದ (ಹಿರಿಯ) ಮೆಂಡಲೀಫನ ಹದಿನೇಳನೆಯ ಮತ್ತು ಕೊನೆಯ ಮಗನೇ ಡ್ಮಿಟ್ರಿ. ಉದ್ಯೋಗದಿಂದ ದೊರೆಯುತ್ತಿದ್ದ ಅಲ್ಪವೇತನ ಸೈಬೀರಿಯದ ಕಠಿಣಜೀವನ ನಡೆಸಲು ಈ ದೊಡ್ಡ ಸಂಸಾರಕ್ಕೆ ಸಾಕಾಗುತ್ತಿರಲಿಲ್ಲ. ಡ್ಮಿಟ್ರಿಯ ಜನನದ ತರುಣದಲ್ಲೇ ತಂದೆಗೆ ದೃಷ್ಟಿ ನಾಶವಾಗಿ ದೊಡ್ಡ ಸಂಸಾರ ನಿರ್ವಹಣೆಯ ಪೂರ್ತಿ ಹೊಣೆ ತಾಯಿಯ ಮೇಲೆ ಬಿತ್ತು. ಉತ್ಸಾಹಿಯೂ ಕಾರ್ಯಶೀಲೆಯೂ ಆಗಿದ್ದ ಈಕೆ ಗಾಜಿನ ಕಾರ್ಖಾನೆ ಸ್ಥಾಪಿಸಿ ಮನೆವಾರ್ತೆಯನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಳು. ಮೆಂಡಲೀಫನ ಅಕ್ಕನ ಗಂಡ ಒಬ್ಬ ರಾಜಕೀಯ ಕೈದಿಯಾಗಿ ಸೈಬೀರಿಯದಲ್ಲಿಯೇ ಇರಬೇಕಾಗಿತ್ತು. ಈತ ಈ ಎಳೆ ಅಣುಗನಿಗೆ ಪ್ರಕೃತಿವಿಜ್ಞಾನದ ಮೊದಲ ಪಾಠಮಾಡಿ ಆ ವಿಸ್ಮಯಕರ ಪ್ರದೇಶಕ್ಕೆ ಪ್ರವೇಶ ದೊರಕಿಸಿಕೊಟ್ಟ. ಬಾಲಕನ ಜ್ಞಾನದಾಹ ಕುದುರಿತು. 1849ರಲ್ಲಿ ಇವನ ಪ್ರೌಢಶಾಲಾ ಶಿಕ್ಷಣ ಪೂರ್ತಿ ಆಗುವ ವೇಳೆಗೆ ಎರಡು ದುರಂತಗಳು ಘಟಿಸಿ ಭವಿಷ್ಯ ಜೀವನದ ಗತಿಯನ್ನೇ ಬದಲಾಯಿಸಿಬಿಟ್ಟವು. ತಂದೆ ತೀರಿ ಹೋದ; ಗಾಜಿನ ಕಾರ್ಖಾನೆ ಬೆಂಕಿಗೆ ಆಹುತಿ ಆಯಿತು.

	ಆ ವೇಳೆಗೆ ಉಳಿದ ಮಕ್ಕಳ ಬದುಕು ಬಲುಮಟ್ಟಿಗೆ ನೆಲೆಗೊಂಡಿದ್ದುದರಿಂದ ತಾಯಿ ತನ್ನ ಈ ಸುಟಿ ಮಗನಿಗೆ ಉನ್ನತ ಶಿಕ್ಷಣ ಕೊಡಿಸಲೋಸ್ಕರ ಇವನ ಸಹಿತ ಮಾಸ್ಕೋ ನಗರಕ್ಕೆ ಪಯಣಿಸಿದಳು. ಆದರೆ ಡ್ಮಿಟ್ರಿಗೆ ಸೈಬೀರಿಯದ ಪ್ರಾಂತೀಯ ಭಾಷೆ ಮಾತ್ರ ತಿಳಿದಿದ್ದುದರಿಂದ ಮಾಸ್ಕೋದಲ್ಲಿ ಕಾಲೇಜಿಗೆ ಪ್ರವೇಶ ದೊರೆಯಲಿಲ್ಲ. ದೃಢ ನಿರ್ಧಾರದ ತಾಯಿ ಮಗನನ್ನು ಸೇಂಟ್ ಪೀಟರ್ಸ್‍ಬರ್ಗ್‍ಗೆ ಕರೆತಂದಳು. ಅಲ್ಲಿ ಮೆಂಡಲೀಫ್ ರಷ್ಯನ್ ಭಾಷೆ ಕಲಿತು ಪ್ರೌಢಶಾಲಾ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಪ್ರವೇಶ ಗಳಿಸಿದ. ಗಣಿತ, ಭೌತ ಮತ್ತು ರಸಾಯನವಿಜ್ಞಾನಿಗಳನ್ನು ಪ್ರಧಾನ ವಿಷಯಗಳಾಗಿ ತೆಗೆದುಕೊಂಡು ಎಲ್ಲರಿಗಿಂತ ಉತ್ತಮ ವಿದ್ಯಾರ್ಥಿಯಾಗಿ ತೇರ್ಗಡೆಯಾದ. ಆಗ ಇವನ ಆರೋಗ್ಯ ಅಷ್ಟು ಉತ್ತಮವಾಗಿರಲಿಲ್ಲ. ಫುಪ್ಫುಸದ ತೊಂದರೆಯಿಂದ ನರಳುತ್ತಿದ್ದ. ಅಲ್ಲದೇ ಇವನ ತಾಯಿ ಆಗಲೇ ಗತಿಸಿದ್ದರಿಂದ ಧೃತಿಗೆಟ್ಟು ಆರೋಗ್ಯ ಇನ್ನೂ ಹದಗೆಟ್ಟಿತು. ವೈದ್ಯರ ಶಿಫಾರಸ್ಸಿನ ಮೇರೆಗೆ ಆರೋಗ್ಯ ಸುಧಾರಣೆಗೋಸ್ಕರ ಒಣಹವೆಯ ಪ್ರದೇಶವಾದ ಕ್ರಿಮಿಯಕ್ಕೆ ಹೋದ. ಆದರೆ ಅಲ್ಲಿ ಯುದ್ಧ ನಡೆದದ್ದರಿಂದ ಸ್ವಲ್ಪ ದಿವಸಗಳಲ್ಲಿ ಸೇಂಟ್ ಪೀಟರ್ಸ್ ಬರ್ಗ್‍ಗೇ ವಾಪಸಾಗಬೇಕಾಯ್ತು. (1866)

	ಸಾಮಾನ್ಯವಾಗಿ ಅನಿಲಗಳು ಒತ್ತಡಕ್ಕೆ ಮಣಿದು ದ್ರವಿಸುತ್ತವೆ. ಆದರೆ ಒಂದು ಉಷ್ಣತಾಮಿತಿ ಮೀರಿದರೆ ಎಷ್ಟೇ ಒತ್ತಡ ಹೇರಿದರೂ ಅವು ದ್ರವಿಸುವುದಿಲ್ಲ. ಈ ಮಿತಿ ಒಂದೊಂದು ಅನಿಲಕ್ಕೂ ಬೇರೆ ಬೇರೆ. ಇದಕ್ಕೆ ಸಂಧಿಸ್ಥ ಉಷ್ಣತೆ (ಕ್ರಿಟಿಕಲ್ ಟೆಂಪರೇಚರ್) ಎಂದು ಹೆಸರು. ಈ ವಿದ್ಯಾಮಾನವನ್ನು ಮೊದಲಿಗೆ ಗುರುತಿಸಿದವ ಮೆಂಡಲೀಫ್. ಆದರೆ ಕಾರಣಾಂತರದಿಂದ ಈ ಕೀರ್ತಿ ಐರಿಷ್ ರಸಾಯನವಿಜ್ಞಾನಿ ತಾಮಸ್ ಆಂಡ್ರ್ಯೊಸ್‍ನಿಗೆ ಸಂದಿದೆ. ಡ್ಮಿಟ್ರಿಗೆ ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಪಡೆಯಲು ಬಲು ಹಂಬಲವಿತ್ತು. ಆದರೆ ಆಗ ರಷ್ಯದಲ್ಲಿ ಇದಕ್ಕೆ ಅವಕಾಶಗಳಿರಲಿಲ್ಲವಾದ್ದರಿಂದ ಸರ್ಕಾರದ ಅನುಮತಿ ಪಡೆದು ಫ್ರಾನ್ಸ್ ಹಾಗೂ ಜರ್ಮನಿಗಳಲ್ಲಿ ಪ್ರವಾಸಮಾಡಿದ. ಪ್ಯಾರಿಸ್ನಲ್ಲಿ ಹೆನ್ರಿರೀನೋ (1810-78) ಎಂಬ ರಸಾಯನ ಹಾಗೂ ಭೌತವಿಜ್ಞಾನಿಯೊಂದಿಗೆ ಕೆಲಸಮಾಡಿದ. ಹೈಡಲ್ ಬರ್ಗ್‍ನಲ್ಲಿ ತನ್ನದೇ ಆದ ಒಂದು ಪುಟ್ಟ ಪ್ರಯೋಗಾಲಯ ಕೂಡ ಸ್ಥಾಪಿಸಿದ. ಅಲ್ಲಿ ರಾಬರ್ಟ್ ಬುನ್ಸೆನ್ (1811-99) ಮತ್ತು ಗುಸ್ಟಾಫ್ ಕಿರ್ಕಫ್ (1824-87) ಎಂಬ ರಸಾಯನವಿಜ್ಞಾನಿಗಳ ಪರಿಚಯವಾಯಿತು. ಅದೇ ವೇಳೆಗೆ ಈತ ಜರ್ಮನಿಯಲ್ಲಿ ನಡೆದ ಒಂದು ವಿಜ್ಞಾನ ಸಮ್ಮೇಳನದಲ್ಲಿ ಇಟಲಿಯ ವಿಖ್ಯಾತ ರಸಾಯನ ವಿಜ್ಞಾನಿ ಸ್ಟಾನಿಸ್ಲಾವೊ ಕಾನಿಡ್ಸಾರೊ (1826-1910) ಪರಮಾಣು ತೂಕ ಕುರಿತಂತೆ ಮಾಡಿದ ಸಂಶೋಧನಾತ್ಮಕ ಭಾಷಣ ಆಲಿಸಿ ಬಹಳಷ್ಟು ಪ್ರಭಾವಿತನಾದ. ಮೆಂಡಲೀಫ್ ಮುಂದೆ ಸೇಂಟ್ ಪೀಟರ್ಸ್‍ಬರ್ಗ್‍ಗೆ ಮರಳಿ (1865) ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ರಸಾಯನವಿಜ್ಞಾನ ಪ್ರಾಧ್ಯಾಪಕನಾಗಿ ನೇಮಕಗೊಂಡ. ಕೇವಲ ಅರುವತ್ತು ದಿನಗಳಲ್ಲಿ ಸಾವಯವ ರಸಾಯನ ವಿಜ್ಞಾನದ ಬಗ್ಗೆ ಒಂದು ಪಠ್ಯ ಪುಸ್ತಕ ಬರೆದ. ಪ್ರತಿಯೊಂದು ಪುಟದಲ್ಲೂ ಅಧಿಕ ಸಂಖ್ಯೆಯ ಅಡಿ ಟಿಪ್ಪಣಿಗಳಿದ್ದು ಪುಸ್ತಕದಷ್ಟೇ ವಿಸ್ತಾರವಾಗಿದ್ದುದು ಇದರ ವೈಶಿಷ್ಟ್ಯವಾಗಿತ್ತು. ಮದ್ಯ ಹಾಗೂ ನೀರಿನ ಸಂಯೋಗದ ಬಗ್ಗೆ ಬರೆದ ಪ್ರೌಢಪ್ರಬಂಧಕ್ಕೆ ಈತನಿಗೆ ಡಾಕ್ಟೊರೇಟ್ ಪದವಿ ದೊರೆಯಿತು. ವಿದ್ಯಾರ್ಥಿಗಳು ಈತನ ಪಾಠ ಪ್ರವಚನಗಳನ್ನು ಬಲು ಮೆಚ್ಚಿಕೊಂಡರು.

	ಆಗಲೇ 63 ವಿಭಿನ್ನ ರಾಸಾಯನಿಕ ಧಾತುಗಳು (ಕೆಮಿಕಲ್ ಎಲಿಮೆಂಟ್ಸ್) ಆವಿಷ್ಕರಿಸಲ್ಪಟ್ಟದ್ದುವು. ಇವುಗಳಲ್ಲಿ ಎದ್ದು ಕಾಣುತ್ತಿದ್ದ ಸಾದೃಶ್ಯ, ವೈದೃಶ್ಯಗಳು ವಿಜ್ಞಾನಿಗಳ ಗಮನಕ್ಕೆ ಬಂದಿದ್ದುವು ಎಂದೇ ಈ ಗುಣಲಕ್ಷಣಗಳ ಆಧಾರದ ಮೇಲೆ ಇವನ್ನು ವ್ಯವಸ್ಥಿತ ಕ್ರಮದಲ್ಲಿ ವರ್ಗೀಕರಿಸುವ ಪ್ರಯತ್ನಗಳು ನಡೆದಿದ್ದುವು. ಆದರೆ ಯಾವುವೂ ಫಲಕಾರಿ ಆಗಿರಲಿಲ್ಲ. ಸಹಜವಾಗಿಯೇ ಮೆಂಡಲೀಫ್ ಈ ಸಮಸ್ಯೆಯಿಂದ ಆಕರ್ಷಿತನಾದ. ಹಲವಾರು ವರ್ಷಪರ್ಯಂತ ರಾಸಾಯನಿಕ ವಿವರಗಳ ಸಂಗ್ರಹಣೆ ಹಾಗೂ ಅಧ್ಯಯನಗಳಿಂದ 1869ರಲ್ಲಿ ಈತ ಧಾತುಗಳ ಕ್ರಮಾಗತ ಪಟ್ಟಿ ತಯಾರಿಸಲು ಸಿದ್ಧನಾದ. ಧಾತುಗಳ ಭೌತಗುಣಗಳೂ ವಿಭಿನ್ನವಾಗಿದ್ದುವು. ಕೆಲವು ಹಗುರ ಲೋಹಗಳಾಗಿದ್ದರೆ ಮತ್ತೆ ಕೆಲವು ಭಾರ ಪದಾರ್ಥಗಳಾಗಿದ್ದುವು. ಕೆಲವು ಧಾತುಗಳು ಸಾಮಾನ್ಯ ಪರಿಸ್ಥಿತಿಯಲ್ಲಿ ದ್ರವವಾಗಿದ್ದು ವಿಭಿನ್ನ ಪರಿಸ್ಥಿತಿಗಳಲ್ಲಿ ಘನರೂಪ ಪಡೆಯುತ್ತಿದ್ದುವು. ಕೆಲವು ಅನಿಲರೂಪ ಪಡೆದಿದ್ದುವು. ಕೆಲವು ಅತಿ ಪಟುವಾಗಿದ್ದು ಸ್ಫೋಟಕಗುಣಯುತವಾಗಿದ್ದರೆ ಮತ್ತೆ ಕೆಲವು ಹಲವು ವರ್ಷಪರ್ಯಂತ ತಟಸ್ಥವಾಗಿರುತ್ತಿದ್ದುವು. ಆದರೂ ಇವೆನ್ನೆಲ್ಲ ಹಣೆಯುವ ಒಂದು ಸುಸಂಗತ ವ್ಯವಸ್ಥೆ ಇದೆ. ಇದನ್ನು ತಾನು ಪಡೆಯುವೆನೆಂಬ ಭರವಸೆ ಈತನಲ್ಲಿತ್ತು. ಇಲ್ಲಿಯೂ ಪ್ರಕೃತಿ ನಿಯಮವೊಂದಿದೆ ಅದರಂತೆ ಧಾತುಗಳನ್ನು ಕ್ರಮಾಗತವಾಗಿ ವರ್ಗೀಕರಿಸಬಹುದೆಂಬುದು ಈತನ ಅಚಲ ನಂಬಿಕೆ.

	ಈ ವೇಳೆಗಾಗಲೇ ಕಾನಿಡ್ಸಾರೊ ತಯಾರಿಸಿದ್ದ ಧಾತುಗಳ ಪರಮಾಣು ತೂಕಗಳ ಪಟ್ಟಿಯನ್ನು ಉಪಯೋಗಿಸಿಕೊಂಡು ಮೆಂಡಲೀಫ್ ಧಾತುಗಳ ಆವರ್ತ ಕೋಷ್ಟಕವನ್ನು (ಪೀರಿಯಾಡಿಕ್ ಟೇಬಲ್) ರಚಿಸಿದ. ಇದರಲ್ಲಿ ಪರಮಾಣು ತೂಕ ಆರೋಹಣಕ್ರಮದಲ್ಲಿರುವಂತೆ ಧಾತುಗಳನ್ನು ವರ್ಗೀಕರಿಸಲಾಗಿತ್ತು. ಹೈಡ್ರೊಜನ್ ಮೊದಲನೆಯದಾದರೆ ಯುರೇನಿಯಮ್ ಕೊನೆಯದು. ಧಾತುಗಳ ಗುಣಲಕ್ಷಣಗಳನ್ನು ಆಧಾರವಾಗಿಟ್ಟುಕೊಂಡು ಪರಸ್ಪರ ಹೋಲಿಕೆಯುಳ್ಳ ಧಾತುಗಳು ಒಂದೇ ಸಾಲಿನಲ್ಲಿ ಬರುವಂತೆ ಒಟ್ಟು ಏಳು ನೀಟಸಾಲುಗಳನ್ನು ರಚಿಸಿದ. ಆವರ್ತಕೋಷ್ಟಕದಲ್ಲಿ ಪ್ರತಿಯೊಂದು ಏಳು ಧಾತುಗಳ ಅನಂತರ ಮತ್ತೆ ಅವೇ ಗುಣಲಕ್ಷಣಗಳು ಪುನರಾವರ್ತಿಸುತ್ತವೆ. ಈ ಕೋಷ್ಟಕದಲ್ಲಿ ಧಾತುವಿನ ಸ್ಥಾನದ ಆಧಾರದ ಮೇಲೆ ಅದರ ರಾಸಾಯನಿಕ ವರ್ತನೆಯನ್ನು ಕಂಡುಹಿಡಿಯುವ ಸೌಲಭ್ಯವಿದೆ. ಮೆಂಡಲೀಫನ ಈ ಶೋಧ ಕ್ಷಿಪ್ರವಧಿಯಲ್ಲಿ ಜರ್ಮನ್ ಭಾಷೆಗೆ ಅನುವಾದಗೊಂಡಿತು. ಹೀಗಾಗಿ ಅದನ್ನು ಎಲ್ಲ ವಿಜ್ಞಾನಿಗಳೂ ಗಮನಿಸುವಂತಾಯಿತು. ಇವನಿಗೆ ರಾಯಲ್ ಸೊಸೈಟಿಯ ಡೇವಿ ಪದಕ ನೀಡಿ ಗೌರವಿಸಲಾಯಿತು (1882). ಅಂದಿನ ರಷ್ಯ ಸರ್ಕಾರ ಇಂಥ ವಿಷಯಗಳಲ್ಲಿ ಅಲ್ಪಾಸಕ್ತಿ ಮಾತ್ರ ವಹಿಸಿತ್ತು. ಈ ಕಾರಣ ಅಮೆರಿಕ ಸಂಯುಕ್ತ ಸಂಸ್ಥಾನದ ಪೆನ್ಸಿಲ್ವೇನಿಯ ರಾಜ್ಯ ಸರ್ಕಾರ ಅಲ್ಲಿಯ ತೈಲ ನಿಕ್ಷೇಪಗಳ ಬಗ್ಗೆ ಕೆಲಸಮಾಡಲು ಇವನನ್ನು ಕೇಳಿಕೊಂಡಿತು. ಅದರಂತೆ ರಷ್ಯನಿಯೋಗದ ಮುಖಂಡನಾಗಿ ಅಲ್ಲಿಗೆ ತೆರಳಿ ತೈಲನಿಕ್ಷೇಪಗಳನ್ನು ಸಂದರ್ಶಿಸಿ ಬಂದು ಸ್ವದೇಶದ ಕಾಕಸಸ್ ತೈಲನಿಕ್ಷೇಪಗಳನ್ನು ಅಭಿವರ್ಧಿಸುವ ಬಗ್ಗೆ ಅಮೂಲ್ಯ ವರದಿ ಒಪ್ಪಿಸಿದ. ಮೆಂಡಲೀಫನ ಆದಿ ಆವರ್ತಕೋಷ್ಟಕದಲ್ಲಿ ನಡು ನಡುವೆ ಖಾಲಿಸ್ಥಾನಗಳು ಉಳಿದಿದ್ದುವು. ಮುಂದೆ ಆವಿಷ್ಕರಿಸಲ್ಪಡಬಹುದಾದ ನೂತನ ಧಾತುಗಳಿಗಾಗಿ ಕಾಯ್ದಿರಿಸಿದ್ದ ಸ್ಥಾನಗಳಿವು. ಆ ಧಾತುಗಳ ಗುಣ ಲಕ್ಷಣಗಳನ್ನು ಮೆಂಡಲೀಫ್ ಕರಾರುವಾಕ್ಕಾಗಿ ಮುನ್ನುಡಿದಿದ್ದು ಆಗ ಇದಕ್ಕೆ ಪುರಸ್ಕಾರ ದೊರೆಯದಿದ್ದರೂ ಮುಂದೆ ಕೆಲವೇ ವರ್ಷಗಳಲ್ಲಿ ಈತನ ಭವಿಷ್ಯವಾಣಿ ನಿಜವಾದಾಗ ಈತ ಪ್ರಪಂಚಪ್ರಸಿದ್ಧನಾದ. ಅವರ್ತಕೋಷ್ಟಕಕ್ಕೆ ವೈಜ್ಞಾನಿಕ ಮನ್ನಣೆ ಲಭಿಸಿತು. ಧಾತುಗಳ ಗುಣಲಕ್ಷಣಗಳು ಪರಮಾಣು ತೂಕಕ್ಕೆ ತಕ್ಕಂತೆ ಆವರ್ತಗೊಳ್ಳುತ್ತವೆ ಎಂಬ ಮೆಂಡಲೀಫ್ ನಿಯಮವನ್ನು ಈಗ ತಿದ್ದುಪಡಿ ಮಾಡಲಾಗಿದೆ. ಹೊಸ ಆವರ್ತನಿಯಮ ಪ್ರಕಾರ ಧಾತುಗಳ ಗುಣಲಕ್ಷಣಗಳು ಅವುಗಳ ಪರಮಾಣು ಸಂಖ್ಯೆಗೆ ತಕ್ಕಂತೆ ಆವರ್ತಗೊಳ್ಳುತ್ತವೆ.

	ಸಾಮಾಜಿಕವಾಗಿ ಇವನ ವರ್ಚಸ್ಸು ಎಷ್ಟಿತ್ತು ಎಂಬುದಕ್ಕೆ ಒಂದು ನಿದರ್ಶನ: 1876ರಲ್ಲಿ ಇವನು ತನ್ನ ಪತ್ನಿಯಿಂದ ದಾಂಪತ್ಯವಿಚ್ಛೇದನ ಪಡೆದು ಒಬ್ಬ ಕಲಾ ವಿದ್ಯಾರ್ಥಿಯನ್ನು ಮದುವೆಯಾದ. ಸನಾತನ ಸಂಪ್ರದಾಯಸ್ಥರ ಪ್ರಕಾರ ಇದು ದ್ವಿಪತ್ನಿತ್ವ ಎನಿಸಿಕೊಂಡರೂ ಆರೋಪಿ ಮೆಂಡಲೀಫನಾಗಿದ್ದುದರಿಂದ ಪ್ರಸಂಗವನ್ನು ಅಲ್ಲಿಗೆ ಕೈಬಿಡಲಾಯಿತಂತೆ.

	ಫ್ರೆಂಚ್ ರಸಾಯನವಿಜ್ಞಾನಿಗೇ ಲ್ಯೂಸ್ಯಾಕ್ (1718-1850) ಬಲೂನಿನಲ್ಲಿ ಕುಳಿತು ಆಕಾಶಯಾನ ಮಾಡಿದಂತೆ, ಮೆಂಡಲೀಫ್ ಕೂಡ ಒಂದು ಬಲೂನಿನಲ್ಲಿ ಕುಳಿತು ಮೇಲೇರಿ ಸೂರ್ಯಗ್ರಹಣದ ಛಾಯಾಚಿತ್ರ ತೆಗೆಯಲು ಹೊರಟ (1887). ಬಲೂನಿನಲ್ಲಿ ಒಬ್ಬರಿಗೆ ಮಾತ್ರ ಸ್ಥಳಾವಕಾಶವಿತ್ತು. ಇವನಿಗಾದರೂ ಬಲೂನಿನ ಕಾರ್ಯನಿರ್ವಹಣೆ ಏನೂ ತಿಳಿಯದು. ಆದರೂ ಭೂಮಿಗೆ ಸುರಕ್ಷಿತವಾಗಿ ಮರಳಿದ್ದು ಇವನ ಸುದೈವ. ಮೆಂಡಲೀಫ್ ಕೆಚ್ಚೆದೆಯವ. ವಿದ್ಯಾರ್ಥಿಗಳ ವಿರುದ್ಧ ರಷ್ಯ ಸರ್ಕಾರದ ಬಿಗಿಧೋರಣೆಯನ್ನು ಖಂಡಿಸಲು ಹಿಂಜರಿದವನಲ್ಲ. ಇವನ ಪ್ರಗತಿಪರ ಭಾವನೆಗಳನ್ನು ಮೆಚ್ಚದ ಅಧಿಕಾರಿಗಳು ಇವನಿಗೆ ವಿಜ್ಞಾನದ ಅಕಾಡೆಮಿ ಸದಸ್ಯತ್ವ ಸಿಗದಂತೆ ಮಾಡಿದರು. ಇದರಿಂದ ಮನನೊಂದ ಮೆಂಡಲೀಫ್ ತನ್ನ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆಯಿತ್ತ.

	ಜನಸಾಮಾನ್ಯರಲ್ಲಿ ಇವನಿಗೆ ತುಂಬ ಒಲವು ಇತ್ತು. ಅವರೊಡನೆ ಕಲೆತು ವಿಚಾರ ವಿನಿಮಯ ಮಾಡಿಕೊಳ್ಳಲೆಂದೆ ರೈಲಿನಲ್ಲಿ ಮೂರನೆಯ ದರ್ಜೆಯಲ್ಲಿ ಪ್ರಯಾಣ ಮಾಡುತ್ತಿದ್ದನಂತೆ. ಈತ ಉಜ್ಜ್ವಲ ದೇಶಾಭಿಮಾನಿ. 1904ರಲ್ಲಿ ಜಪಾನ್ ವಿರುದ್ಧದ ಯುದ್ಧದಲ್ಲಿ ದೇಶಕ್ಕಾಗಿ ದುಡಿದ.

	ಮೆಂಡಲೀಫನಿಗೆ 21ವರ್ಷ ವಯಸ್ಸಾಗಿದ್ದಾಗ ವೈದ್ಯರು ಆತನಿಗೆ ಇನ್ನು ಕೇವಲ 6 ತಿಂಗಳು ಆಯುಷ್ಯವಿರಬಹುದೆಂದು ಹೇಳಿದ್ದರು. ಆದರೆ ಈತ 73 ವರ್ಷಗಳ ತುಂಬುಜೀವನ ನಡೆಸಿದ. ರಸಾಯನವಿಜ್ಞಾನದ ಭವಿಷ್ಯೋತ್ಕರ್ಷಕ್ಕೆ ಭದ್ರತಳಪಾಯ ಹಾಕಿದ. ಏಕೆಂದರೆ ಕೆಪ್ಲರನ ನಿಯಮಗಳು ಖಭೌತವಿಜ್ಞಾನಕ್ಕೆ ಹೇಗೋ ಮೆಂಡಲೀಫನ ಆವರ್ತಕೋಷ್ಟಕ ರಸಾಯನವಿಜ್ಞಾನಕ್ಕೆ ಹಾಗೆ ಜಿಗಿ ಹಲಗೆ! ಈತ ಸಾಯುವ ವೇಳೆಗೆ ಆವರ್ತಕೋಷ್ಟಕದಲ್ಲಿ 86 ಧಾತುಗಳು ಸೇರಿದ್ದುವು. ತಾನು ಖಾಲಿ ಬಿಟ್ಟಿದ್ದ ಜಾಗಗಳೆಲ್ಲವೂ ಭರ್ತಿ ಆದುದನ್ನು ನೋಡುವ ಭಾಗ್ಯ ಈತನದಾಗಿತ್ತು. ಈಗ(1998) ಕೋಷ್ಟಕ ಪೂರ್ಣವಾಗಿದೆ. ಎಲ್ಲ 92 ನೈಸರ್ಗಿಕ ಧಾತುಗಳೂ ಆವಿಷ್ಕರಿಸಲ್ಪಟ್ಟು ಆಯಾ ಸ್ಥಾನಗಳಲ್ಲಿ ಪೊರ್ದಿಕೆ ಆಗಿವೆ. ಅಲ್ಲದೆ 13 ನೂತನ ಧಾತುಗಳೂ ಸಂಶ್ಲೇಷಿಸಲ್ಪಟ್ಟಿವೆ. 101ಪರಮಾಣು ಸಂಖ್ಯೆಯ ಧಾತುವಾಗಿ ಮೆಂಡಲೀಫನ ಹೆಸರನ್ನೇ ಇಡಲಾಗಿದೆ. ಅದೇ ಮೆಂಡಲೀವಿಯಮ್.
		(ಎಚ್.ಜಿ.ಎಸ್.:ಎಸ್.ವಿಇಎನ್‍ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ